ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಯುವತಿ, ವೀಡಿಯೋ ವೈರಲ್
ಗುರುಗ್ರಾಮ: ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಖಾಯಂ ಉದ್ಯೋಗಿ ಸ್ಥಿತಿ (ಪರ್ಮನೆಂಟ್ ಎಂಪ್ಲಾಯೀ ಸ್ಟೇಟಸ್) ಕೊಡದೆ ಹೋದರೆ ತಾನು ಈ ಐದಂತಸ್ತಿನ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿಯೊಬ್ಬಳು ಬೆದರಿಕೆ ಹಾಕಿರುವ ಘಟನೆ ಗುರುಗ್ರಾಮದ ಸೈಬರ್ ಸಿಟಿಯಲ್ಲಿ ನಡೆದಿದೆ. ಸಿನಿಮಾ ಶೈಲಿಯಲ್ಲಿ ಬೆದರಿಕೆಯೊಡ್ಡುತ್ತಿರುವ ಈ ಯುವತಿಯ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಪಿಂಕ್ ಕಲರ್ ಶರ್ಟ್, ಕಪ್ಪು ಬಣದ ಟ್ರೌಸರ್ ಹಾಕಿರುವ ವ್ಯಕ್ತಿ ಯುವತಿಯನ್ನು ಬೇಡಿಕೊಳ್ಳುತ್ತಿರುವುದು, ಆ ಮೂಲಕ ಆಕೆಯ ಆತ್ಮಹತ್ಯೆ ನಿರ್ಧಾರವನ್ನು ಬದಲಿಸಲು ಪ್ರಯತ್ನಿಸುತ್ತಿರುವುದು ಕಂಡಿದೆ. ಸುಮಾರು ನಿಮಿಷಗಳ ನಂತರ ಯುವತಿ ಆ ಯುವಕನ ತೋಳುಗಳನ್ನು ಹಿಡಿದು ನಿಧಾನವಾಗಿ ಕೆಳಗೆ ಬರುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
"ಮೇ 24 ರಂದು, ಆಕೆಗೆ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯು ತನ್ನ ಪ್ರೊಬೆಷನರಿ ಅವಧಿ ಮುಗಿದ ನಂತರ ತನಗೆ ಪರ್ಮನೆಂಟ್ ಎಂಪ್ಲಾಯೀ ಆಗಿ ಬಡ್ತಿ ನೀಡಿಲ್ಲವೆಂಬುದನ್ನು ಅರಿತು ಆಕೆ ಆತ್ಮಹತ್ಯೆ ಬೆದರಿಕೆ ಹಾಕಿದ್ದಳು " ಎಂದು ಎಸ್.ಎಚ್.ಒ. ಸೆಕ್ಷನ್ 18 ಪೋಲೀಸ್ ಠಾಣೆ ಇನ್ಸ್ ಪೆಕ್ಟರ್ ವಿವೇಕ್ ಖಂಡು ಹೇಳಿದ್ದಾರೆಂದು ಟಿಒಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಆ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಕೆಲ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೋಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಯುವತಿಯ ಮನವೊಲಿಸುವಂತೆ ಸಂಸ್ಥೆಯ ನಿರ್ವಾಹಕರಿಗೆ ಸೂಚಿಸಿದ್ದಾಗಿ ಪೋಲೀಸರು ಹೇಳಿದ್ದಾರೆ.
ಈ ನಡುವೆ ವೀಡಿಯೋ ಬಗ್ಗೆ ಪ್ರತಿಕ್ರಯಿಸಿರುವ ಸಂಸ್ಥೆ ನಿರ್ವಾಹಕರು ಯುವತಿ ತಮ್ಮ ನಿರೀಕ್ಷೆಯ ಮಟ್ಟದಲ್ಲಿ ಕೆಲಸ ಮಾಡಿಲ್ಲವಾದ ಕಾರಣ ಆಕೆಯನ್ನು ಸಂಸ್ಥೆಯ ಉದ್ಯೋಗಿಯಾಗಿ ಸೇರಿಸಲಿಲ್ಲ ಎಂದಿದ್ದರೆ ಯುವತಿ ಮಹಿಳಾ ಉದ್ಯೋಗಿಗಳಿಗೆ ಆ ಸಂಸ್ಥೆಯಲ್ಲಿ ಉತ್ತಮ ವಾತಾವರಣವಿಲ್ಲ. ಅವರು ನಮ್ಗೆ ಶಿಕ್ಷೆ ನೀಡುವಂತೆ ಕೆಲಸ ತೆಗೆಸಿಕೊಳ್ಳುತ್ತಾರೆ ಎಂದಿದ್ದಾಳೆ.
ಪೋಲೀಸರ ಮಧ್ಯಪ್ರವೇಶದ ನಂತರ ಆಕೆಯ ಸಹೋದ್ಯೋಗಿಗಳು ಹಾಗೂ ಸಂಸ್ಥೆಯ ಅಧಿಕಾರಿಗಳು ಆಕೆಯನ್ನು ಕೆಲಸದಿಂದ ತೆಗೆದುಹಾಕಲಾರರೆಂದು ದೃಢೀಕರಿಸಿದ್ದಾರೆ ಮತ್ತು ಆಕೆ ತನ್ನ ಪ್ರಯತ್ನದಿಂದ ಹಿಂದೆ ಸರಿದು ಮೆಟ್ಟಿಲಿಳಿದು ಕೆಳಗೆ ಆಗಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics